Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪದವಿಪೂರ್ವ ‌ಪಿಯು ನೆನಪುಗಳ ಮರುಹೂರಣ 4/5 ****
Posted date: 31 Sat, Dec 2022 09:08:14 AM
ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್. ಅದರಲ್ಲೂ ಪದವಿಪೂರ್ವ ಕಾಲ ಕಾಲೇಜು ಜೀವನ ಮರೆಯಲಾಗದ ಅನುಭವವಾಗಿರುತ್ತೆ. ಈವಾರ ಬಿಡುಗಡೆಯಾಗಿರುವ ಪದವಿಪೂರ್ವ ಚಿತ್ರದಲ್ಲಿ ಆಗಿನ್ನೂ ಪಿಯುಸಿ ಕಾಲೇಜು ಮೆಟ್ಟಿಲು ಹತ್ತಿರುವ ನವೀನನ ಲೈಫ್ ಸ್ಟೋರಿ ಅನಾವರಣವಾಗಿದೆ. ಸಾಮಾನ್ಯವಾಗಿ ಹೀರೋ ಅಂದಕೂಡಲೇ ಆತನನ್ನು ವೈಭವೀಕರಿಸಲಾಗುತ್ತದೆ. ಆದರೆ ಇಲ್ಲಿ ನವೀನ ಒಂದು ಪಾತ್ರವಷ್ಟೇ ಅಗುವ ಮೂಲಕ ನೈಜತೆ ತುಂಬಿದ್ದಾರೆ. ಆಗಿನ್ನೂ ಹರೆಯ ಚಿಗುರುತ್ತಿರುವ ಪಿಯು ವಿದ್ಯಾರ್ಥಿಗಳ ಕಥೆಯಿದು. ಆಗಷ್ಟೆ ಹೈಸ್ಕೂಲ್ ಮುಗಿಸಿ, ನೂರಾರು ಕನಸುಗಳ‌ ಮೂಟೆಯನ್ನೇ  ಹೊತ್ತು ಕಾಲೇಜ್ ಅಂಗಳಕ್ಕೆ  ಕಾಲಿಡುವ  ಪೀಪಿ ನವೀನ (ಪೃಥ್ವಿ)ನ ದುರಂತ ಕಥೆಯನ್ನು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರು ತೆರೆದಿಟ್ಟಿದ್ದಾರೆ.  ಆಗಷ್ಟೇ ಪಿಯುಸಿಗೆ ಪ್ರವೇಶಿಸಿರುವ ನವೀನನ ಸ್ನೇಹಿತರ ಬಳಗ ದೊಡ್ಡದು.  ತಂದೆಯ (ಶರತ್ ಲೋಹಿತಾಶ್ವ) ಆಸೆಯಂತೆ ಡಾಕ್ಟರ್ ಆಗಬೇಕೆಂದು ಕನಸು ಕಂಡ ಹುಡುಗನ ಪಿಯುಸಿ ಬದುಕಿನಲ್ಲಿ ಏನೆಲ್ಲ ಏರಿಳಿತಗಳು ನಡೆದವು ಎನ್ನುವುದೇ  ಪದವಿ ಪೂರ್ವ ಸಿನಿಮಾದ ಕಥೆ.
 
ಪದವಿ ಪೂರ್ವ ಚಿತ್ರದ  ಕಥೆ ನಡೆಯುವುದು ಮಲೆನಾಡಿನ ಸುಂದರ ಪರಿಸರದಲ್ಲಿ, ತೊಂಬತ್ತರ ದಶಕದಲ್ಲಿ  ಮೊಬೈಲ್, ವಾಟ್ಸಾಪ್, ಫೇಸ್‌ಬುಕ್ ಯಾವುದೂ ಇಲ್ಲದ  ಆ ಕಾಲದಲ್ಲಿ ನಡೆಯೋ ಘಟನೆಗಳನ್ನು  ನಿರ್ದೇಶಕರು ಸೊಗಸಾಗಿ ತೆರೆಮೇಲೆ ತಂದಿದ್ದಾರೆ. ಆ ಎಳೆ ಹೃದಯಗಳಲ್ಲಿ ಅರಳುವ ಪ್ರೀತಿ, ಪ್ರೇಮ, ಸ್ನೇಹ ಸಂಬಂಧ,  ತಮ್ಮ ಮಕ್ಕಳ ಭವಿಷ್ಯದ ಮೇಲೆ ನೂರಾರು ಕನಸುಗಳನ್ನಿಟ್ಟುಕೊಂಡ  ಪೋಷಕರು. ಇದೆಲ್ಲವನ್ನೂ ನಿರ್ದೇಶಕರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾಲೇಜಿನಲ್ಲಿ  ವಿದ್ಯಾರ್ಥಿಗಳ ನಡುವಿನ ತರಲೆ, ತುಂಟಾಟ, ಕಾಲೇಜ್  ಕ್ಯಾಂಪಸ್‌ನಲ್ಲಿ  ನಡೆಯೋ ಹುಡುಗಾಟ, ತರಲೆ, ತಮಾಷೆ, ಜಗಳ   ಮೊದಲಪ್ರೇಮ ಎಲ್ಲವೂ ಈ ಚಿತ್ರದಲ್ಲಿದೆ. ಜೊತೆಗೆ ಇಡೀ ಜರ್ನಿಯನ್ನು ಅವಲೋಕಿಸುವ  ಕ್ಕ್ಲೈಮ್ಯಾಕ್ಸ್ ಕೊಟ್ಟು ಪ್ರೇಕ್ಷಕ ಥೇಟರಿನಿಂದ ಹೊರಬಂದರೂ ಅದೇ ಗುಂಗಿನಲ್ಲಿರುವಂತೆ ಮಾಡಿದ್ದಾರೆ. ನಾಯಕ ಪೃಥ್ವಿ ಶಾಮನೂರು ತನ್ನ ಮೊದಲ ಚಿತ್ರದಲ್ಲೇ  ಲವಲವಿಕೆಯಿಂದ ಅಭಿನಯಿಸುವ ಮೂಲಕ ನೋಡುಗರಿಗೆ  ಇಷ್ಟವಾಗುತ್ತಾರೆ. ಮುಂದೆ ಉತ್ತಮ ಅವಕಾಶಗಳು ಸಿಕ್ಕರೆ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಯೂಥ್ ಹೀರೋ ಆಗುವ ಎಲ್ಲಾ  ಲಕ್ಷಣಗಳನ್ನು  ಹೊಂದಿದ್ದಾರೆ.  ಈ ಸಿನಿಮಾದಲ್ಲಿ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 
 
ನಾಯಕಿಯರಾದ ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಯವ  ಮೂಲಕ  ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಪೋಷಕರ ಪಾತ್ರದಲ್ಲಿ  ನಟಿಸಿರುವ ಶರತ್ ಲೋಹಿತಾಶ್ವ, ರಂಗಾಯಣ ರಘು ಇವರೆಲ್ಲರೂ  ಪ್ರಬುದ್ಧ ಅಭಿನಯ ನೀಡಿದ್ದಾರೆ.  ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ  ಅದಿತಿ ಪ್ರಭುದೇವ, ಯಶಸ್, ನಯನ ಮುಂತಾದ ಕಲಾವಿದರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಸರ್‌ಪ್ರೈಸ್  ನೀಡುತ್ತದೆ. 
 
ಚಿತ್ರದ ಅರಂಭದಲ್ಲೇ ನಾಯಕನ ನೆನಪಿಗಾಗಿ ನಿರ್ಮಾಣವಾದ ಆಸ್ಪತ್ರೆಯ ಉದ್ಘಾಟನೆಗೆ  ಬರುವ ಇವರು ತಮ್ಮ ಹಿಂದಿನ ಜೀವನವನ್ನು ಮೆಲುಕು ಹಾಕುವುದೇ  ಪದವಿಪೂರ್ವ,  ಚಿತ್ರದಲ್ಲಿ  ಫ್ರೆಂಡ್ಸ್ ಅಂದ್ರೇನೇ ಜೀವನ ಹಾಡು ಮೆಲುಕು ಹಾಕುವಂತಿದೆ, ಚಿತ್ರ ವೀಕ್ಷಿಸುವಾಗ ಪ್ರೇಕ್ಷಕ ತನ್ನ ಹಿಂದಿನ ಪಿಯು ಜೀವನವನ್ನು ನೆನಪಿಸಿಕೊಳ್ಳುತ್ತಾನೆ, ಎಲ್ಲೋ ನನ್ನ ಜೀವನದಲ್ಲೂ ಇಂಥ ಘಟನೆ ನಡೆದಿತ್ತಲ್ಲ ಎಂದು ತನ್ನ  ನೆನಪಿನಾಳಕ್ಕೆ ಜಾರುತ್ತಾನೆ. ತಾಂತ್ರಿಕವಾಗಿ  ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಸಂತೋಷ್ ರೈ ಪಾತಾಜೆ ಅವರು ತಮ್ಮ ಕ್ಯಾಮೆರಾದಲ್ಲಿ  ಮಲೆನಾಡಿನ ಸೊಬಗನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲ ಹಾಡುಗಳೂ ಗುನುಗುವಂತಿವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪದವಿಪೂರ್ವ ‌ಪಿಯು ನೆನಪುಗಳ ಮರುಹೂರಣ 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.